ನಾಗಾರಾಧನೆ -
	ಮಾನವ ಜನಾಂಗದ ಆದಿಕಾಲದಿಂದಲೇ ನಾಗಪೂಜೆ ನಡೆದುಬರುತ್ತಿದೆ. ಋಗ್ವೇದದ ಪ್ರಧಾನ ದೈವತ ಸರ್ಪ ಎನ್ನಲಾಗಿದೆ. ಸಿಂಧೂ ಸಂಸ್ಕøತಿಯ ಅವಶೇಷಗಳಲ್ಲಿ ನಾಗಮಿಥುನವಿದೆ. ಅಶ್ವತ್ಥವೃಕ್ಷದ ಕೆಳಗೆ ಎಡಬಲಗಳಲ್ಲಿ ಹೆಡೆಯೆತ್ತಿರುವ ನಾಗಗಳ ಬಳಿ ಪೂಜೆ ಮಾಡುವ ವ್ಯಕ್ತಿಗಳ ಚಿತ್ರವಿದೆ. ಅಶ್ವತ್ಥೋ ದೇವಸದನಃ ಎಂಬುದು ಅಥರ್ವವೇದದ ಮಾತು. ನಾಗನ ಕಲ್ಲುಗಳನ್ನು ನೆಟ್ಟಿರುವುದು ಹೆಚ್ಚಾಗಿ ಅಶ್ವತ್ಥವೃಕ್ಷದ ಕೆಳಗೆ. ಭಾರತೀಯರಿಗೆ ಮಾತ್ರವಲ್ಲ ಈಜಿಪ್ಟ್, ಗ್ರೀಸ್, ಅಸೀರಿಯ-ಮುಂತಾದ ಪುರಾತನ ಸಂಸ್ಕøತಿಗಳ ಜನತೆಗೂ ನಾಗನೇ ಆದಿದೈವತ. ಈಜಿಪ್ಟಿನ ಆದಿದೇವ ಮಿಡಿನಾಗ. ಭರತಖಂಡದಲ್ಲಿ ಶೈವ ಶಾಕ್ತ ವೈಷ್ಣವ ಬೌದ್ಧ ಜೈನ ಮುಂತಾದ ಎಲ್ಲ ಮತಸಂಪ್ರದಾಯದವರಲ್ಲಿಯೂ ನಾಗಪ್ರತಿಮೆಯ ಪೂಜೆ ಪ್ರಚಲಿತವಿದೆ.

	ನಾಗ ಎಂಬುದು ಎಲ್ಲ ಜಾತಿಯ ಹಾವುಗಳಿಗೂ ಸಂಬಂಧಿಸುವ ಶಬ್ದವಾದರೂ ಸರ್ಪ ಎಂಬುದು ಅದರ ವಿಶೇಷಾರ್ಥ. ಅದು ಫಣಿ (ಹೆಡೆಯುಳ್ಳದ್ದು), ಅತ್ಯಂತ ವಿಷವುಳ್ಳದ್ದು, ದ್ವೇಷಸಾಧಕ, ನಿಧಿನಿಕ್ಷೇಪಗಳ ಕಾವಲುಗಾರ, ಅಮೂಲ್ಯ ರತ್ನವನ್ನು ಉತ್ಪಾದಿಸಿ, ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುವಂಥದು. ಈ ಭೂಮಿ ನಿಂತಿರುವುದೇ ಸರ್ಪರಾಜನ ಹೆಡೆಯ ಮೇಲೆ ಎಂದು ಪೌರಾಣಿಕರ ಮತ. ಅದು ಶಿವನ ಆಭರಣ, ವಿಷ್ಣುವಿನ ತಲ್ಪ. ಗಣೇಶನ ಉದರಬಂಧ, ಸುಬ್ರಹ್ಮಣ್ಯನ ಅನನ್ಯಸ್ವರೂಪ. ಯೋಗಸಾಧನೆಯಲ್ಲಿ ಕುಂಡಲಿನೀ ಶಕ್ತಿ. ಸುಬ್ರಹ್ಮಣ್ಯ, ಲಕ್ಷ್ಮಣ, ಬಲರಾಮ-ಇವರು ನಾಗರಾಜನ ಅವತಾರರೂಪರು. ಹೀಗಿರುವುದರಿಂದ ಸರ್ಪ ವಧಾರ್ಹವಲ್ಲ. ಅದು ಸತ್ತರೆ ವೈದಿಕ ರೀತಿಯಲ್ಲಿ ಉತ್ತರಕ್ರಿಯೆ ನಡೆಸುವ ವಾಡಿಕೆಯಿದೆ. ಇದರಿಂದ ಸರ್ಪ ಬರೇ ಹಾವಲ್ಲ. ದೇವರು; ಪೂಜಾರ್ಹ. ಇಷ್ಟಾರ್ಥ ಸಿದ್ಧಿಗಾಗಿ ಸರ್ಪನ ಕಲ್ಲಿಗೆ ಹಾಲೆರೆದು ಪೂಜಿಸುತ್ತಾರೆ. ನಾಗನನ್ನು ಹೊಡೆದು ಕೊಲ್ಲುವವರೂ ಇದ್ದಾರೆ. ಕಲ್ಲುನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ-ಎಂಬ ಬಸವಣ್ಣನವರ ವಚನದಲ್ಲಿ ನಾಗಪೂಜೆಯ ಬಗ್ಗೆ ಟೀಕೆ ಇದೆ.

	ನಾಗಾರಾಧನೆಯಿಂದ ಗೋವು ಧನ, ಧಾನ್ಯ, ಆಯುಷ್ಯ, ಸಂತಾನ ಸಮೃದ್ಧಿಯಾಗುವುದೆಂದು ನಂಬಿಕೆಯಿದೆ. ಹುಟ್ಟಿದ ಮಗು ಬಾಳಲೆಂದು ಮಗುವಿಗೆ ನಾಗರತ್ನ, ನಾಗಮಣಿ, ನಾಗರಾಜ, ಶೇಷ, ಭುಜಂಗ-ಇತ್ಯಾದಿ ಹೆಸರನ್ನಿಡುತ್ತಾರೆ. ಸಂತಾನಾಪೇಕ್ಷೆಯಿಂದ ನಾಗಪೂಜೆ, ನಾಗಬಲಿಗಳನ್ನು ಆಚರಿಸುತ್ತಾರೆ. ವಡ್ಡಾರಾಧನೆ ಎಂಬ ಕನ್ನಡ ಗದ್ಯ ಗ್ರಂಥದ ಸುಕುಮಾರಸ್ವಾಮಿಯ ಕಥೆಯಲ್ಲಿ ಚಂಪಾನಗರದ ರಾಜಪುರೋಹಿತ ಸೋಮಶರ್ಮ ಮತ್ತು ಅವನ ಮಡದಿ ತ್ರಿವೇದಿ ಎಂಬ ದಂಪತಿಗಳು ಆ ನಗರದ ಉದ್ಯಾನದ ನಾಗರನ್ನು ಪೂಜಿಸಿ, ಹರಕೆ ಸಲ್ಲಿಸಿ, ಮಗಳನ್ನು ಪಡೆದುದಾಗಿಯೂ ಆ ಮಗಳಿಗೆ ನಾಗಶ್ರೀ ಎಂಬ ಹೆಸರಿಟ್ಟುದಾಗಿಯೂ ಆ ಉದ್ಯಾನದಲ್ಲಿ ಕಂಬಳನಾಗ, ಶಂಬರನಾಗ, ಪಾಂಡುಕನಾಗ ಎಂಬ ನಾಗಪ್ರತಿಮೆಗಳಿದ್ದುದಾಗಿಯೂ ಹೇಳಿದೆ.		(ಟಿ.ಕೆ.ಬಿ.)

	ಕಶ್ಯಪ ಪ್ರಜಾಪತಿಗೂ ಕದ್ರುವಿಗೂ ಹುಟ್ಟಿದವನು ನಾಗರು. ಇವರು ಅನಂತ, ವಾಸುಕಿ, ಶಂಖ, ಪದ್ಮ, ಕಂಬಳ, ಕಾರ್ಕೋಟಕ, ಕಾಳಿಯ, ಧನಂಜಯ ಎಂದು ಎಂಟು ಬೇರೆ ಬೇರೆ ಪುರಾಣಗಳಲ್ಲಿ ಬೇರೆ ಬೇರೆಯ ರೀತಿಯಲ್ಲೂ ಹೆಸರುಗಳು ಕಂಡುಬರ್ನತ್ತವೆ. ಈ ಎಂಟು ಜನರು ದೇವತಾರೂಪಿಗಳು. ಇವರ ವಂಶಜರೇ ಜಗತ್ತಿನಲ್ಲಿ ನಾಗರಹಾವುಗಳಾಗಿರುವರೆಂದು ಒಂದು ನಂಬಿಕೆ. ಆದ್ದರಿಂದ ಈ ಸರ್ಪಗಳನ್ನು ಕೊಂದರೆ ದೇವರ ಶಾಪ ಬರುವುದೆಂದೂ ಸಂತಾನನಾಶವಾಗುವುದೆಂದೂ ಭಾರತೀಯರಲ್ಲಿ ಅನೇಕರ ನಂಬಿಕೆ. ಆದಕಾರಣ ಸಂತಾನವಾಗದವರು ಜನ್ಮಾಂತರದಲ್ಲಿ ಈ ತರಹ ಸರ್ಪಶಾಪಕ್ಕೆ ಒಳಗಾಗಿರಬಹುದೆಂದು ಭಾವಿಸಿ ಅದರ ಪರಿಹಾರಕ್ಕಾಗಿ ಈ ನಾಗರನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಶಿಲೆಯಲ್ಲಿ ಹೆಡೆಯಿಂದ ಕೂಡಿದ ಬಾಲವುಳ್ಳ ಮಾನವಾಕಾರದ ನಾಗಗಳನ್ನು ಕೆತ್ತಿಸಿ, ನದೀತೀರ, ಅಶ್ವತ್ಥಕಟ್ಟೆ ಮುಂತಾದ ಕಡೆಗಳಲ್ಲಿ ಇದನ್ನೂ ಪ್ರತಿಷ್ಠೆ ಮಾಡಿಸುತ್ತಾರೆ. ಕೇವಲ ಸರ್ಪಾಕಾರದಲ್ಲಿ ಕೆತ್ತಿಸುವುದೂ ಉಂಟು. ಹೀಗೆ ಮಾಡಿದರೆ ಸರ್ಪನಾಶ ನಿವೃತ್ತಿಯಾಗಿ ಸಂತಾನವಾಗುವುದೆಂದು ಅನೇಕರ ಭಾವನೆಯಾಗಿದೆ. ಇದನ್ನು ಪ್ರತಿಷ್ಠೆ ಮಾಡುವ ವಿಧಾನವನ್ನು ನಾಗಪ್ರತಿಷ್ಠಾವಿಧಿ ಎಂಬ ಗ್ರಂಥದಲ್ಲಿ ನೋಡಬಹುದು.					(ಕೆ.ಎಸ್.ವಿ.)

	ನಾಗಾರಾಧನೆ ಸುಬ್ರಹ್ಮಣ್ಯದೇವರ ಆರಾಧನೆಯಾಗಿರುವುದಕ್ಕೆ ಒಂದು ಐತಿಹ್ಯವಿದೆ; ಹಿಂದೆ ಗರುಡನ ಭೀತಿಯಿಂದ ಗುಹೆಯಲ್ಲಿ ಅಡಗಿದ್ದ ವಾಸುಕಿ ಶಿವನನ್ನು ಕುರಿತು ತಪಸ್ಸುಮಾಡಿದ. ಶಿವ ಮೆಚ್ಚಿ ಬಂದು ಮುಂದೆ ನನ್ನ ಮಗ ಸುಬ್ರಹ್ಮಣ್ಯ ರಾಕ್ಷಸರನ್ನು ಕೊಂದು ನಿನ್ನ ಬಳಿಗೆ ಬರುತ್ತಾನೆ. ನಿನ್ನನ್ನು ತನ್ನ ಅಂಶದಿಂದ ಸ್ಥಾಪಿಸಿ ಪೂಜಾರ್ಹನನ್ನಾಗಿ ಮಾಡುತ್ತಾನೆ, ನಿನ್ನನ್ನು ಭಜಿಸುವವರಿಗೆ ನಾನು ಇಷ್ಟಪ್ರದನಾಗುವೆ-ಎಂದು ವರವಿತ್ತುದಾಗಿ ಸ್ಕಂದಪುರಾಣದ ಸಹ್ಯಾದ್ರಿ ಖಂಡದಲ್ಲಿ ಹೇಳಿದೆ. ಯಕ್ಷಗಾನ ಬಯಲಾಟದ ಸಭಾಲಕ್ಷಣದ ಪ್ರಕಾರ ಮಂಡಲನಾಯಕನಾದ ಸುಬ್ಬರಾಯನಿಗೆ (ಸರ್ಪನಿಗೆ) ರಂಗಸ್ಥಳದಲ್ಲಿ ಪೂಜೆ ಸಲ್ಲುತ್ತದೆ.

	ಭಾರತದ ಪಡುವಣ ಸೀಮೆಯಾಗಿರುವ ಗೋಕರ್ಣದಿಂದ ಕನ್ಯಾಕುಮಾರಿವರೆಗಿನ ಪರಶುರಾಮ ಕ್ಷೇತ್ರಕ್ಕೆ ಪ್ರಾಚೀನ ಕಾಲದಲ್ಲಿ ನಾಗಖಂಡ ಎಂದು ಹೆಸರಿತ್ತು (ಶಿಕಾರಿಪುರ ಶಾಸನಾಧಾರ). ಈ ಭಾಗದಲ್ಲಿ ಅಲ್ಲಲ್ಲಿ ನಾಗವನಗಳಿವೆ. ನಾಗವನದಲ್ಲಿ ನಾಗಪ್ರತಿಮೆಗಳ ಕಲ್ಲುಗಳೂ ಇರುತ್ತವೆ. ಸ್ಥಳಿಕರು ವರ್ಷಕ್ಕೊಮ್ಮೆ ಅಥವಾ ಹರಕೆ ಹೇಳಿದ್ದ ಸಂದರ್ಭದಲ್ಲಿ, ನಾಗವನಕ್ಕೆ ತಂಬುಲ ಎಂಬ ಹೆಸರಿನಲ್ಲಿ ಅರ್ಚನೆ ಸಲ್ಲಿಸುತ್ತಾರೆ. ಪೂಜೆಯ ದಿನ ಕುಲಕುಟುಂಬದವರು ಸೇರಿ ನಾಗರವನವನ್ನು ಶುದ್ಧಮಾಡಿ, ಓಕುಳಿ ನೀರನ್ನು (ಕುರುದಿಯನ್ನು) ಚೆಲ್ಲಿ, ಅರಳು ಎಳನೀರು ತೆಂಗಿನಕಾಯಿ ಬೆಲ್ಲ ಹೂಹಣ್ಣು ತಾಂಬೂಲಗಳನ್ನು ನಿವೇದಿಸುತ್ತಾರೆ. ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಿ ಮನುಷ್ಯರಿಗೂ ದನಕರುಗಳಿಗೂ ಬೆಳೆಗೂ ಕ್ಷೇಮವಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ. ಬ್ರಾಹ್ಮಣೇತರರು ಅರ್ಚಿಸುವ ನಾಗವನದಲ್ಲಿ ಕೋಳಿಯನ್ನು ಬಲಿಕೊಡುವುದೂ ಇದೆ.

	ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ-ಉಡುಪಿ ತಾಲ್ಲೂಕುಗಳಲ್ಲಿ ವೈದ್ಯರು ಎಂಬ ಬ್ರಾಹ್ಮಣ ಕುಲದವರು ನಾಗಮಂಡಲ ಎಂಬ ನೃತ್ಯಾತ್ಮಕ ಪೂಜಾ ಸಮಾರಂಭವನ್ನು ಆಚರಿಸುತ್ತಾರೆ. ಢಕ್ಕೆಯನ್ನು ಬಾರಿಸುತ್ತ ಅದರ ತಾಳದ ಗತಿಗೆ ಸರಿಯಾಗಿ ಕುಣಿದುಕೊಂಡು ನಾಗಮಂಡಲದ ನಾಗನಿಗೂ (ಸುಬ್ರಹ್ಮಣ್ಯ) ಇತರ ದೆವ್ವದೇವತೆಗಳಿಗೂ ಪೂಜೆ ಸಲ್ಲಿಸುತ್ತಾರೆ. ಅರ್ಚಕನಾದ ವೈದ್ಯ ಅರ್ಧನಾರಿ, ಅರ್ಧಪುರುಷ ವೇಷದಲ್ಲಿರುತ್ತಾನೆ.						
			   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ